ಮನಸು ಮನಸುಗಳ ಪಿಸುಮಾತು

Friday, April 23, 2010

ಕಣ್ಣಂಚಿನ ಕನಸುಗಳಿಗೆ ರಂಗು ತುಂಬುವ ಆ ದಿನ.........

ಚಿನ್ನೂ ಅಂತೂ ನಾವು ಅಂದುಕೊಂಡ ದಿನ ಬಂದೇ ಬಿಡ್ತು. ಕಳೆದ ೯ ತಿಂಗಳಿನಿಂದಲೂ ಕಂಗಳಲ್ಲಿ ನಿನ್ನ ಕಾಣುವ ಕನಸಿನ ಚಿತ್ತಾರ ಹೊತ್ತವಳಿಗೆ ಅವಕ್ಕೆಲ್ಲಾ ರಂಗು ತುಂಬುವ ಆ ಸುಂದರ ಘಳಿಗೆ. ನಾನು ಒಬ್ಬರನೊಬ್ಬರು ನೋಡುವ ಆ ಸುಂದರ ಕ್ಷಣ ನಿಜಕ್ಕೂ ರೋಮಾಂಚನವೆನಿಸುತ್ತದೆ. ಎದೆಯಲ್ಲಿ ಆಡದೆ ಉಳಿದ ಮಾತುಗಳೆಲ್ಲಾ ಒಂದೇ ಬಾರಿಗೆ ಹೊರಹೊಮ್ಮುವ ಆ ದಿನ ನಿಜವಾಗಿಯೂ ಅವಿಸ್ಮರಣೀಯ! ಭಾವನೆಗಳ ಮಹಾಪೂರದಲ್ಲಿ ನಾವಿಬ್ಬರೂ ತೋಯುವ ಆ ಘಳಿಗೆ ಎಂದೂ ಮಾಸದ ನೆನಪು.

ಮಳೆರಾಯನ ಆಗಮನಕ್ಕೆ ಚೆನ್ನಾಗಿ ಕಾದು ನಿಂತು ನೆಲದ ಮೇಲೆ ಬಿದ್ದ ಹನಿಗಳಿಗೆ ಕಂಪು ಸೂಸುವ ವಸುಂಧರೆಯಂತೆ, ಪರಾಗ ಸ್ಪರ್ಶಕ್ಕೆ ಕಾದು ಕುಳಿತ ಸುಮದಂತೆ, ನಿನ್ನ ಎದೆ ಗೂಡಿನಲ್ಲಿ ಬೆಚ್ಚಗಿರುವ ಆಸೆ ಹೊತ್ತು ಕಾದು ಕುಳಿತವಳಿಗೆ ಕನಸು ನನಸಾಗುವ ಕಾಲವಿದು. ಪ್ರೀತಿ ಹುಟ್ಟುವುದು ಸುಕೋಮಲವಾದ ಹೃದಯದಲ್ಲಿ ಮಾತ್ರ. ಆಗ ಮಾತ್ರ ಮನಸ್ಸುಗಳು ಒಂದಾಗಿರಲು ಸಾಧ್ಯ ಇದು ಎಂದೂ ಪ್ರೀತಿ ನಿಯಮ.ಆ ಹೃದಯಗಳು ಒಂದಾದರೇ ಮಾತ್ರ ಆ ಪ್ರೀತಿಯ ಆವಿಷ್ಕಾರ!

ಹಾಗೆ ಒಂದಾದ ನಮ್ಮ ಪ್ರೀತಿಯನ್ನು ನಮ್ಮ ಕೊನೆ ಉಸಿರು ಇರೋವವರೆಗೂ ಕಣ್ಣಲ್ಲಿ ಕಣ್ಣಟ್ಟು ಜೋಪಾನ ಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಅಲ್ವಾ ಚಿನ್ನೂ. ಅದಕ್ಕಾಗಿ ಕಂಡ ಎಲ್ಲ ದೇವರನ್ನು ಮನದುಂಬಿ ಪ್ರಾರ್ಥಿಸಿದ್ದೇನೆ ನಮ್ಮಿಬ್ಬರ ಈ ಬಂಧ ಅಳಿಯದೆ ಕೊನೆಯವರೆಗೂ ಉಳಿಯಲಿ ನಮ್ಮ ಬಾಳಿನಲ್ಲಿ ನಾವು ಹೆಜ್ಜೆ ಇಡುವ ಆ ದಾರಿಯಲ್ಲಿ ನಮ್ಮಿಬ್ಬರ ಹೆಜ್ಜೆಗಳು ಎಂದೂ ಏರುಪೇರಾಗದೇ ಸರಿಸಮಾನವಾಗಿ ಸಾಗುತ್ತಿರಬೇಕು ಎಂಬ ಆಸೆಯೊಂದಿಗೆ ನಿನ್ನ ಮುಂದೆ ನಿಲ್ಲಲು ಅಣಿಯಾಗಿದ್ದೇನೆ.

ಚಿನ್ನೂ! ಹೆಣ್ಣು ತಾನಾಗಿ ಹೂ ಮುಡಿದಾಗ ಬರುವ ಅಂದಕ್ಕಿಂತಲೂ ತನ್ನ ನಲ್ಲ ಮುಡಿಸಿದಾಗ ಆ ಸೌಂದರ್ಯ ಇಮ್ಮಡಿಸುತ್ತದೆ ಅಂತ ಕೇಳಿದ್ದೆ. ಹಾಗೆ ನೀ ಮುಡಿಸುವ ಮುಲ್ಲೆಯನ್ನು ಮುಡಿದು ಆ ಅಂದವನ್ನು ನಿನ್ನ ಕಂಗಳಲ್ಲಿ ನೋಡುವ ಆಸೆ ನನ್ನುದು. ಇಷ್ಟೆಲ್ಲಾ ಆಸೆ ಕನಸುಗಳೊಂದಿಗೆ ನಿನ್ನವಳಾಗಲು ಕಾದವಳು
ನಿನ್ನ ಬಂಗಾರಿ

Monday, April 5, 2010

ಮರುಳಾ????????

ನಟ್ಟ ನರುಳಿನ ಒಂದು ಹೊತ್ತು
ಮುಚ್ಚಿದ್ದ ಕಣ್ಣನ್ನು ಪಟ್ಟೆಂದು ತೆರೆಯಲು
ಕಾರಣವೇನು?
ಮೆಲ್ಲನೆ ಹಣೆ ನೇವರಿಸಿ
ಮುಂಗುರುಳಿನೊಂದಿಗೆ ಚೆಲ್ಲಾಟವಾಡಿದ ಹಾಗೆ
ಝೆಲ್ಲೆನಿಸಿತು ಎದೆ ಒಂದು ಘಳಿಗೆ
ಇದು ಕನಸಾ? ಮರುಳಾ?
ಇಲ್ಲಾ ಬಂದವನು ನನ್ನವನಾ?
ಛೇ ಅವನಿಗಿಲ್ಲ ಬಿಂಕ! ಬಿಗುಮಾನ
ಬರಲು ನನ್ನೆಡೆಗೆ
ಅವ ನನ್ನ ಹೃದಯದ ರಾಜಕುಮಾರ
ಅಂತಃಪುರಕ್ಕೆ ಕಾಲಿರಿಸಲು ಅವನಿಗಿಲ್ಲ ಅಡೆತಡೆ
ಅವನ ನೋಡುವ ಬಯಕೆಯಿಂದ ಮುಚ್ಚಿದ ಕಂಗಳಲ್ಲಿ
ಕನಸಾಗಿ ಕಾಡಲು ಬಂದವನು ನನ್ನವನಾ?
ಆಸೆಗಳೇ ಹೀಗೆ ಹರಡಿಕೊಳ್ಳುತ್ತವೆ
ಆಕಾಶಕಿಂತಲೂ ಮಿಗಿಲಾಗಿ
ಅವಕ್ಕಿಲ್ಲ ಹಗಲು ರಾತ್ರಿಗಳ ಇರಾದೆ
ತಡೆಹಿಡಿದಷ್ಟು ಚಿಗುರುತ್ತವೆ ಹೊಸ ಹೊಸತಾಗಿ
ಕತ್ತರಿಸಿದಷ್ಟು ಒತ್ತರಿಸಿ ಬರುವ ಸುಳಿ ಬಾಳೆಯಂತೆ
ಕತ್ತಲಾದಂತೆ ಬೆತ್ತಲಾಗಿ ನಿಲ್ಲುವ ಬಯಕೆಗಳಂತೆ....
ಇದೇನು ಮರುಳಾ?

Wednesday, March 24, 2010

ನೀ ಬರುವ ವೇಳೆಗೆ ಮರೆಯದೆ ತಾ ಮೊಲ್ಲೆ ಹೂವ ನನ್ನೀ ಮುಡಿಗೆ................

ಹುಡುಗಾ ನಿನ್ನ ಎದುರು ನೋಡುವ ದಿನಗಳು ಸನಿಹವಾಗುತ್ತಿದ್ದಂತೆಯೇ ಮನಸು ಯಾಕೋ ತಳಮಳಕ್ಕೆ ಒಳಗಾಗುತ್ತದೆ, ಎದೆಯಲ್ಲಿ ಸಣ್ಣಗೆ ಕಂಪನ! ಮನದಲ್ಲಿಯೇ ಪ್ರತಿರೂಪಿಸಿ ನಿನ್ನ ಮನಸಾರೆ ಪ್ರೀತಿಸಿದ ನಿನ್ನ ಭೇಟಿ ಮಾಡುವ ಆ ಕ್ಷಣ ಹೇಗಿರಬಹುದು ಹೇಗೆ ನಿನ್ನ ಎದುರುಗೊಳ್ಳುತ್ತೀನಿ ಅನ್ನಿಸುತ್ತೆ.. ಅಂದುಕೊಂಡಾಗಲೇ ಮುಖದ ಮೇಲೆ ತಂತಾನೆ ನಾಚಿಕೆಯ ಎಳೆ ಹಾದು ಹೋಗಿದ್ದು ಯಾಕೋ? ಹೇಯ್ ಕಳ್ಳ ನಿನಗೆ ಹೀಗೆ ಏನೂ ಅನ್ನಿಸೋದೆ ಇಲ್ವಾ?

ಹಾಗೆ ಪದೇ ಪದೇ ನೆನಪಾಗೋದು ಮೊನ್ನೆ ಹಬ್ಬದ ದಿನ ಒಂದು ಸಣ್ಣ ಜೋಕಿಗೆ ನಾವಿಬ್ಬರೂ ಬಿಟ್ಟೂ ಬಿಡದೆ ಇಡೀ ದಿನವೆಲ್ಲಾ ನಕ್ಕಿದ್ದವಲ್ಲಾ ಅದನ್ನು ಮರೆಯಲು ಸಾಧ್ಯವೆ ಇಲ್ಲಾ ಗೊತ್ತಾ? ಮೂರು ವರ್ಷಗಳ ಬಳಿಕ ಮನದುಂಬಿ ನಕ್ಕ ದಿನ ಅದು ನಿಜವಾಗಿಯೂ ಆ ನಗು ನಿನಗೇ ಸಲ್ಲಬೇಕು.. ನಿನ್ನ ನಾನು ಇಷ್ಟು ಹಚ್ಚಿಕೊಂಡೆನಲ್ಲಾ! ಅದು ಎಂದೂ ನಿನ್ನ ಪ್ರೀತಿಯಿಂದ ಹೊರಬರಲಾರದಷ್ಟು! ಎಂದೂ ನಿನ್ನ ದನಿಗೆ ದನಿಯಾಗಿ, ನಿನ್ನ ನೋಟಕ್ಕೆ ಕಣ್ಣಾಗಿ , ನಿನ್ನ ಉಸಿರಿನಲ್ಲಿಯೇ ಮಿಳಿತವಾಗಬೇಕೆಂಬ ಮಹದಾಸೆ. ಇದೇನಾ ಪ್ರೀತಿ ಅಂದ್ರೆ?

ಜಗತ್ತಿನ ಎಲ್ಲಾ ಜೀವ ಕೋಟಿಯು ಹಪಹಪಿಸೋದು ಈ ಪ್ರೀತಿಗಾಗಿಯೇ! ಒಣಗಿ ನಿಂತ ಮರಗಳು ತನ್ನ ನಲ್ಲ ವಸಂತನ ಆಗಮನಕ್ಕೆ ಚಿಗುರಿ ಅವನನ್ನು ಸ್ವಾಗತಿಸುವಂತೆ , ನಿನ್ನ ಆಗಮನಕ್ಕೆ ಹೊಸ ಕನಸು, ಆಸೆಯೊಂದಿಗೆ ನಿನ್ನೆದೆಯ ಚಿಪ್ಪಿನಲ್ಲಿ ಸ್ವಾತಿಮುತ್ತಾಗಲು ಕಾದವಳು.. ಈ ಧೀರ್ಘ ಅಗಲಿಕೆಗೆ ಒಂದು ಪುಟ್ಟ ವಿದಾಯ ನಮ್ಮಿಬ್ಬರ ಭೇಟಿ ಅದು ಎಂದೂ ಅವಿಸ್ಮರಣೀಯ ! ಮೊದಲ ನೋಟ, ಮೊದಲ ಮಾತು, ಎಂದೂ ನಮ್ಮ ಬಾಳಿನ ಪುಟಗಳಲ್ಲಿ ಅಳಿಯದ ಸುವರ್ಣಪುಟಗಳು.. ಹಾಗೆಯೇ ನಿನ್ನೊಲೊಂದು ಬೇಡಿಕೆ

ಹೊತ್ತ ಸಾವಿರ ಕನಸುಗಳನ್ನು ಹೂವ ಹಾಸಿಗೆ ಮಾಡಿ
ಹಾಸಲು ಕಾದಿದೆ ಮನ ನಿನ್ನ ನಡೆಮುಡಿಗೆ
ಎದುರುಗೊಳ್ಳುವ ನಿನ್ನೊಲೊಂದು ಬೇಡಿಕೆ
ಮರೆಯದೆ ತಾ ಒಂದಿಷ್ಟು ಮೊಲ್ಲೆ ಹೂವ
ನನ್ನೀ ಮುಡಿಗೆ.....


ಎಂದೂ ನಿನ್ನವಳು....

Monday, February 22, 2010

ಮೊದಲ ನೋಟದಲ್ಲೇ ನಿನ್ನನ್ನು ಕಣ್ತುಂಬಿಸಿಕೊಳ್ಳುವಾಸೆ..

ಗೆಳೆಯಾ ನೀ ಬರುವ ದಿನಗಳನ್ನು ನೆನೆಸುತ್ತಾ ದಿನಗಳನ್ನು ಕಳೆಯುವದರಲ್ಲೂ ಒಂಥರಾ ಖುಷಿ ಇದೆ ಗೊತ್ತಾ? ನೆನಸಿದಾಗಲೆಲ್ಲ ಮನ ತಲ್ಲಣಿಸುತ್ತದೆ ಫೋನಿನಲ್ಲಿ ಸರಾಗವಾಗಿ ಮಾತನಾಡಿದಷ್ಟು ನೀನು ನನ್ನ ಮುಂದೆ ಬಂದಾಗ ನಿನ್ನೊಂದಿಗೆ ಸಲಿಗೆಯಿಂದಿರಲು ಸಾಧ್ಯವಾ? ಆಗ ಮನಸ್ಸು ತುಂಬಾ ಮುಜುಗರಕ್ಕೆ ಒಳಗಾಗುತ್ತದೆ..
ಒಬ್ಬರನೊಬ್ಬರ ದನಿ ಕೇಳುತ್ತಲೆ ತಿಂಗಳುಗಳನ್ನು ಕಳೆದಿದ್ದೇವೆ ಒಂದೇ ಒಂದು ಬಾರಿ ನೋಡಬೇಕು ಎಂದು ದಿನಕ್ಕೆ ನೂರು ಬಾರಿ ಮನಸು ಅಂದುಕೊಳ್ಳುತ್ತದೆ ನಿನ್ನ ಜವಾಬ್ದಾರಿಗಳನ್ನು ಮುಗಿಸಿ ಬರುವವರೆಗೂ ನಾನು ಕಾಯಲೇಬೇಕಾಗಿದೆ! ಎಲ್ಲೋ ಕುಳಿತು ನನ್ನ ಎಲ್ಲಾ ಸಂಗತಿಗಳಿಗೂ ಸಮಾಧಾನ ಹೇಳಿದ ನಿನ್ನ ಮಡಿಲಲ್ಲಿ ತಲೆಯಿಟ್ಟು ಕೊನೆ ಬಾರಿ ಅತ್ತು ಇಡೀ ದುಃಖವನ್ನೆಲ್ಲಾ ಒಂದೇ ಬಾರಿ ಕಳೆದುಕೊಳ್ಳುವಾಸೆ ನಿನ್ನ ಜೊತೆಯಲ್ಲಿ ಇರುವ ದಿನಗಳಲ್ಲಿ ಎಂದೂ ನನ್ನ ಕಣ್ಣೀರಿನಿಂದ ನಿನ್ನ ಮನ ನೋಯಿಸಲು ನಾನು ಸಿಧ್ದಳಿಲ್ಲ. ನೋವು , ದುಃಖ , ಅವಮಾನ ಎಲ್ಲವೂ ಅಂದಿಗೇ ಕೊನೆಯಾಗಬೇಕು. ನಿನ್ನೊಂದಿಗೆ ಇರುವ ಎಲ್ಲಾ ಕಾಲವು ನನಗೆ ನೆಮ್ಮದಿಯ ಕ್ಷಣಗಳಾಗಿರಬೇಕು ನಿನ್ನೊಂದಿಗೆ ಎಲ್ಲವನ್ನು ಮರೆತು ಹೊಸ ಕನಸಿನೊಂದಿಗೆ ಜೀವನ ನಡೆಸಲು ಸಿಧ್ದಳಿದ್ದೇನೆ. ಹಾಗೆಯೇ ನಿನ್ನ ಕಷ್ಟ ಸುಖಗಳಲ್ಲಿ ಸಮ ಭಾಗಿಯಾಗುವಾಸೆ ನನ್ನ ಮನಸು , ಹೃದಯ ನನ್ನ ನಿರ್ಮಲ ಪ್ರೀತಿಯನ್ನು ನಿನಗೆ ಸಂಪೂರ್ಣವಾಗಿ ನಿನಗೆ ಧಾರೆಯೆರೆಯಲು ತೀರ್ಮಾನಿಸಿದ್ದೇನೆ ನಿನ್ನಲ್ಲೂ ನಿರೀಕ್ಷಿಸುವುದು ಇಷ್ಟನ್ನೇ.. ಅದು ನನಗೆ ಸಂಪೂರ್ಣವಾಗಿ ಸಿಗುತ್ತೆ ಅನ್ನೋ ಭರವಸೆಯೊಂದಿಗೆ ನಿನ್ನ ನಿರೀಕ್ಷೆಯಲ್ಲೆ ಕಾಲವನ್ನು ಕಳೆಯುತ್ತಿದ್ದೇನೆ..
ಕತ್ತಲೆ ತುಂಬಿದ್ದ ಹೃದಯದಲ್ಲಿ ಬೆಳಕು ಚೆಲ್ಲುವ ಸೂರ್ಯನ ಕಿರಣಗಳಂತೆ ಬಂದ ನಿನ್ನ ಪ್ರೀತಿಯನ್ನು ನೆಚ್ಚಿಕೊಂಡಿದ್ದೇನೆ. ಮೊದಲ ಭೇಟಿಯಂದು ನಿನ್ನನ್ನು ಕಣ್ತುಂಬಿಸಿಕೊಂಡು ನಿನ್ನ ರೂಪವನ್ನು ನನ್ನ ಹೃದಯದಲ್ಲಿ ಅಚ್ಚೊತ್ತುವಾಸೆ ಅದು ಎಂದೂ ಮಾಸಬಾರದು ಎನ್ನುವುದೊಂದೆ ಆಶಯ. ಹಾಗೆಯೇ ಅತಿಯಾದ ಭಾವಾವೇಶಕ್ಕೆ ಒಳಗಾಗಬಾರದೆಂದು ಅಂದುಕೊಂಡು ಕೆಲಸದಲ್ಲಿ ನಿರತಳಾದವಳಿಗೆ ತಟ್ಟನೆ ತೇಲಿ ಬಂದ ಹಾಡೊಂದು
"ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
ಏನೂ ದಾರಿ ಕಾಣದೆ ಹೋಗಿ ಮನಸು ಅಳುತಾ ಕುಂತೈತೆ"
ಪುನಃ ನಿನ್ನ ನೆನಪನ್ನು ಹೆಚ್ಚಾಗಿಸಿತು. ಆದರೂ ನೀನು ಬರುವವರೆಗೂ ನಿರಮ್ಮಳ ಮನಸ್ಸಿನಿಂದ ಇದ್ದು ನಿನ್ನ ಪವಿತ್ರ ಪ್ರೇಮದ ಆಕಾಂಕ್ಷಿಯಾಗಿ ನಿನ್ನನ್ನು ಕಣ್ತುಂಬಿಸಿಕೊಳ್ಳಲು ಕಾತುರಳಾಗಿರುವವಳಿಗೆ ನಿನ್ನ ಮುಖ ತೋರುವ ಮನಸ್ಸು ಮಾಡು................

ನಿನ್ನ ಮನಸ್ಸು ಕದ್ದ ಕಳ್ಳಿ

Friday, January 1, 2010

ನಿನ್ನ ಅಪ್ಪುಗೆಯಲ್ಲಿ ಕರಗುವ ಆ ಹೊತ್ತು ಎಂದೂ ಜಾರದಿರಲಿ.....


ಹುಡುಗಾ ನಿನಗೆ ನೆನಪಿದೆಯಾ? ನಂಗೊತ್ತು ನಿನಗೆಲ್ಲಿ ನೆನಪಿರುತ್ತೆ? ಎಲ್ಲವನ್ನು ಮರೆಯುವ ಮರೆಗುಳಿ ನೀನು! ಪ್ರತಿಯೊಂದನ್ನು ನೆನಪಿಸಿ ನಾನೆ ಹೇಳಬೇಕು. ಕಳೆದ ವರುಷ ಇದೇ ತಿಂಗಳಲ್ಲಿ ನಾವು ಕಾಲೇಜಿನಿಂದ ಕ್ಯಾಂಪ್ ಹೋಗಿದ್ವಿ. ಕಾಲೇಜಿನ ಕೊನೆಯ ದಿನಗಳು ಅವು ಪರೀಕ್ಷೆ ಮುಗಿದ ನಂತರ ಎಲ್ಲರೂ ಅವರವರ ಮನೆ ಕಡೆಗೆ ಎನ್ನುವುದನ್ನು ನೆನಸಿದರೆ ಸಂಕಟ. ಕಳೆದ ಮೂರು ವರುಷಗಳಲ್ಲಿ ಬರೀ ಖುಷಿ ಖುಷಿಯ ದಿನಗಳು.. ಹಾಗೆ ನಾವು ಬಿಳಿಗಿರಿರಂಗನ ಬೆಟ್ಟಕ್ಕೆ ೫ ದಿನಗಳ ಕ್ಯಾಂಪ್ ನಲ್ಲಿ ಕಳೆದ ಕ್ಷಣಗಳನ್ನು ಹೇಗೆ ತಾನೇ ಮರೆಯಲು ಸಾಧ್ಯ..
ಬಸ್ಸಿನಲ್ಲಿ ನನ್ನೊಂದಿಗೆ ಕುಳಿತ ನಿನ್ನ ಕೈಗಳಲ್ಲಿ ಕೈ ಬೆಸೆದು ಭುಜಕ್ಕೆ ಒರಗಿ ಆ ಸುಂದರ ಪರಿಸರವನ್ನು ನೋಡುತ್ತಾ ಹೋಗ್ತಾ ಇರೋ ಆ ಹೊತ್ತು ಬಹಳ ಅಪ್ಯಾಯಮಾನ, ಮುಚ್ಚಿದ ಕಂಗಳಲ್ಲಿ ಕನಸಿನ ಚಿತ್ತಾರ ಹೀಗೆ ಜೀವನಪರ್ಯಂತ ನಿನ್ನೊಂದಿಗೆ ಪ್ರಯಾಣಿಸುವ ಹಂಬಲದ ಮನಸು ಬೇಗ ಬೆಟ್ಟ ಸಿಗದೇ ಇರಲಪ್ಪಾ ಅಂತ ಅನ್ಕೋತಿತ್ತು. ಸಾಗುವ ದಾರಿಯುದ್ದಕ್ಕೂ ಎಲ್ಲರೂ ಒಬ್ಬರನೊಬ್ಬರು ರೇಗಿಸುತ್ತಾ, ಹಾಡುತ್ತಾ ಹೋಗ್ತಾ ಇದ್ದರೆ ನಮ್ಮಿಬ್ಬರದೇ ಆದ ಲೋಕದಲ್ಲಿ ವಿಹರಿಸುತ್ತಿರುವಾಗಲೇ ಬೆಟ್ಟ ತಲುಪಿಯಾಗಿತ್ತು.
ಕೈ ಹಿಡಿದು ಮೆಟ್ಟಿಲು ಹತ್ತುವಾಗಲೂ ಆ ಬಿಳಿಗಿರಿರಂಗನಲ್ಲಿ ಒಂದೇ ಬೇಡಿಕೆ ಹಿಡಿದ ಕೈ ಎಂದೂ ಸಡಿಲವಾಗದಿರಲಿ ಎಂಬ ಹರಕೆಯೊಂದಿಗೆ ಆ ದೇವರ ದರ್ಶನ ಮಾಡಿದಾಗ ನಮ್ಮಲ್ಲಿ ಏನೋ ಸಂತೃಪ್ತ ಭಾವ. ಚಂದೂ ನಾವು ಹಾಗೆ ಬೆಟ್ಟದಲ್ಲಿ ಸೋಲಿಗರ ಹಾಡಿಯಲ್ಲಿ ಆಡಿದ್ದು ನೆನಪಿದೆಯಾ? ಪುಟ್ಟ ಪುಟ್ಟ ಮಕ್ಕಳ ಜೊತೆಯಲ್ಲಿ ನಾವು ಸೇರಿ ಸೋಲಿಗರ ಹಾಡುಗಳನ್ನು ಹಾಡಿದ್ದನ್ನು ನೆನಸಿದರೆ ಈಗಲೂ ತುಂಬಾ ನಗು ಬರುತ್ತದೆ. ಆಗ ನೀನು ಹೇಳ್ತಾ ಇದ್ದೆ ಇಲ್ಲಿ ಇವರಿಗೊಂದು ಶಾಲೆ ಇದೆ ನಾವಿಬ್ಬರೂ ಮದುವೆಯಾದ ಮೇಲೆ ಇಲ್ಲೆ ಬಂದು ಕೆಲಸಕ್ಕೆ ಸೇರಿ ಬಿಡೋಣ , ಬೆಟ್ಟದ ಮೇಲೊಂದು ಪುಟ್ಟ ಮನೆ, ಅದರಲ್ಲಿ ನನ್ನ ಮುದ್ದಿನ ಹೆಂಡತಿ ಆಹಾ ಏನು ಸೂಪರ್ ಆಗಿರುತ್ತೆ ಎಂದು ನೋಡಿ ಕಣ್ಣು ಹೊಡೆದಿದ್ದನ್ನು ಆಗಾಗ ನೆನಸಿಕೊಳ್ತಾ ಇರ್ತೀನಿ ಕಣೋ! ನಿಂಗೆ ಇದೆಲ್ಲಾ ನೆನಪಾಗೋದೆ ಇಲ್ವಾ? ಎಲ್ಲಿ ಆಗುತ್ತೆ ನೀನು ಯಾವಾಗಲೂ ಬ್ಯುಸಿ ಬ್ಯುಸಿ ಅಂತ ನಿನ್ನ ಕೆಲಸದಲ್ಲೆ ಮುಳುಗಿರುತ್ತೀಯಾ. ನಾನಾಗಿಯೇ ಹೇಳಿದರೆ ಮಾತ್ರ ರೇಗಿಸಿ ನಗೋದು ನಿನಗೆ ಚೆನ್ನಾಗಿ ಗೊತ್ತು...
ನಾಲ್ಕು ದಿನ ಬೆಟ್ಟದಲ್ಲಿ ಸೋಲಿಗರ ಜೊತೆ ಕಾಲ ಕಳೆದು ಕೊನೆಯ ದಿನ ನಮ್ಮ ಪಯಣ ದೊಡ್ಡ ಸಂಪಿಗೆ ಮರದ ಕಡೆಗೆ ಹೊರಟಿದ್ದು ನೋಡೋಕೆ ದಾರಿ ಸುಗಮ ಬಹು ಬೇಗ ತಲುಪ್ತೀವಿ ಅಂದು ಕೊಂಡರೆ ಸ್ವಲ್ಪ ದೂರ ನಡೆಯುವಷ್ಟರಲ್ಲಿಯೇ ಎಲ್ಲರೂ ಸುಸ್ತಾಗಿದ್ವಿ ನಡೆಯಲಾಗದೇ ಕುಳಿತವಳಿಗೆ ಇಷ್ಟಕ್ಕೇ ಆಗೊಲ್ಲ ಅಂದರೆ ಹೇಗಮ್ಮಾ ನನ್ನ ಜೊತೆಯಲ್ಲಿ ಹೆಜ್ಜೆ ಇಡೋ ದಾರಿ ಹೇಗಿರುತ್ತೋ ಏನೋ ಬಾ ಅಂತ ಅಲ್ಲಿದ್ದ ಸಂಪಿಗೆ ಹೂಗಳನ್ನು ಆಯ್ದು ನಡೆಯುವ ದಾರಿಗೆ ಹಾಕುತ್ತಾ ಕೈ ಹಿಡಿದು ಕರೆದೊಯ್ದ ನಿನ್ನ ಎಂದೂ ಮರೆಯಲೂ ಸಾಧ್ಯವಿಲ್ಲ.. ಅದೇ ಸಂಜೆ ಸೂರ್ಯ ಮುಳುಗುವ ಹೊತ್ತು ಆ ದಿನವನ್ನು ಎಂದೂ ಮರೆಯಲೂ ಸಾಧ್ಯವಿಲ್ಲ! ಎಲ್ಲರೂ ಹೊರಡುವಾಗ ಮೆಲ್ಲನೆ ನನ್ನ ಹಿಂದೆ ಬಂದು ಕೈ ಹಿಡಿದುಕೊಂಡು ಹೇಯ್ ಚಿತ್ತೀ ನಾಳೆಯಿಂದ ಒಂದು ತಿಂಗಳು ಸಿಗಲ್ಲ ಕಣೇ ನಂಗೇನು ಕೊಡಲ್ವ? ಅದಕ್ಕೇ ಏನು ಕೊಡಬೇಕು ನಿನಗೆ ಹೋಗೋ ಓಡುತ್ತಿದ್ದವಳನ್ನು ಬಳಸಿ ಮುಂಗುರುಳ ಸರಿಸಿ ಮುತ್ತಿಟ್ಟು ನಾನು ಇದನ್ನೇ ಕಣೇ ಕೇಳಿದ್ದು ಎಂದು ನಕ್ಕದ್ದನ್ನು ನೆನಸಿದರೆ ಈಗಲೂ ಈ ಕ್ಷಣಕ್ಕೂ ಮೈ ನವಿರೇಳುತ್ತದೆ.. ನಿನ್ನ ಮುಖ ನೋಡಲಾಗದೆ ನಾಚಿಕೆಯಿಂದ ನಿನ್ನೆದೆಯಲ್ಲಿ ಮುಖ ಹುದುಗಿಸಿ ನಿಂತ ಆ ಸಮಯ ಎಂದೂ ಜಾರಿ ಹೋಗದಿರಲಿ ಹೀಗೆ ತೋಳುಗಳಲ್ಲಿ ಎಂದೂ ಬಂಧಿಯಾಗಿರುವಾಸೆ ಅಲ್ಲಿ ನಾನು ಯಾವತ್ತೂ ತುಂಬಾ ಸೆಕ್ಯೂರ್‍ಡ್, ಜೀವನ ಪೂರ್ತಿ ನಿನ್ನೊಂದಿಗೆ ಹೀಗೆ ಇರುವ ಆಸೆಯನ್ನು ತಂದಿತ್ತ ಆ ಸಂಜೆಯನ್ನು ನಿಜವಾಗಿಯೂ ಅಭಿನಂದಿಸಬೇಕು.
ಇಷ್ಟೆಲ್ಲಾ ಕಳೆದು ಇಂದಿಗೆ ೮ ತಿಂಗಳಾಗಿದೆ ಮತ್ತೆ ಒಂದು ಬಾರಿ ಅಲ್ಲಿಗೆ ಹೋಗಬೇಕು ಅಂತ ಎಲ್ಲಾ ಸ್ನೇಹಿತರು ಅಂತ ಅನ್ಕೊಂಡಿದೀವಿ. ನೀನು ಕೂಡ ಕೆಲಸ ಕೆಲಸ ಅನ್ನದೆ ಈ ಬಾರಿ ನಮ್ಮ ಜೊತೆ ಬರುವ ಮನಸ್ಸು ಮಾಡು. ಪುನಃ ಆ ಸುಂದರ ಸಂಜೆಯಲ್ಲಿ ನಿನ್ನ ಭೇಟಿ ಮಾಡುವಾಸೆ ಬರ್ತೀಯಾ ಅಲ್ವಾ.........

ಮುಸ್ಸಂಜೆಗಾಗಿ ಕಾದವಳು