ಮನಸು ಮನಸುಗಳ ಪಿಸುಮಾತು

Tuesday, August 30, 2011

ನೀ ಬರುವ ದಿನವೇ ನನಗೆ ನವರಾತ್ರಿಯ ಉತ್ಸವ.....
ಅಂತೂ ಈ ಬಾರಿಯೂ ನಿನ್ನಿಂದ ನನಗೆ ನಿರಾಸೆಯಾ? ಗೌರಿ ಹಬ್ಬಕ್ಕೆ ಬರ್ತೀನಿ ಅಂತ ಹೇಳಿ ಹೋದವನು ನೀನು!.. ನೀ ಹೋಗುವಾಗ ಸೀರೆ ಕೊಡಿಸಿ ಹಬ್ಬಕ್ಕೆ ಉಟ್ಟುಕೊ ಬರುವಾಗ ಜೊತೆಯಲ್ಲಿ ಬಳೆಗಳನ್ನು ತರ್ತೀನಿ ಅಂದವನು ಈ ಸಾರಿಯೂ ಬರಲಿಲ್ಲ.. ಬಳೆಗಳನ್ನು ಕಳುಹಿಸಿದ್ದೀನಿ ಹಾಕೋ ಅಂತೀಯಲ್ಲ ಇದು ಯಾವ ನ್ಯಾಯ? ನೀನೆ ಇಲ್ಲಿ ಇಲ್ಲ ಅಂದ ಮೇಲೆ ಯಾರನ್ನ ನಾನು ಮೆಚ್ಚಿಸಬೇಕು? ಪ್ರತಿ ಸಾರಿಯೂ ನಿನ್ನ ಆಗಮನಕ್ಕೆ ಕನಸು ಕಂಗಳಿಂದ ಕಾಯುವ ಕೆಲಸ ನನ್ನದು..ನೀ ಕೊಡಿಸಿದ ಸೀರೆ, ಬಳೆಗಳು, ಮುಡಿ ತುಂಬಾ ಮೊಲ್ಲೆಯೊಂದಿಗೆ ನಿನ್ನ ಮುಂದೆ ನಿಲ್ಲಬೇಕು ಅನ್ನೋ ಆಸೆ ನನ್ನದು.. ನೋಡುವ ಕಂಗಳು ನಿನ್ನದಾಗಬೇಕು ಅನ್ನುವ ಸ್ವಾರ್ಥ ನನ್ನದು.


ಸೀರೆಯನ್ನು ನೋಡಿದಾಗಲೆಲ್ಲಾ ನೀನು ನನ್ನೊಂದಿಗೆ ಇರುವಷ್ಟೇ ಆನಂದ , ಆ ಬಳೆಗಳು ಅಷ್ಟೇ ಸುಂದರವಾಗಿವೆ, ನೀನೆ ಬರುವುದಿಲ್ಲ ಅಮ್ದ ಮೇಲೆ ನನಗೆ ಅವುಗಳನ್ನು ತೊಡಬೇಕು ಅನ್ನಿಸುತ್ತಿಲ್ಲ.. ನೀನು ಎಂದು ಇಲ್ಲಿಗೆ ಬರುತ್ತೀಯೋ ಅಂದೇ ನನಗೆ ಹಬ್ಬ, ನವರಾತ್ರಿಯ ಉತ್ಸವ... ತಡಮಾಡದೆ ಬೇಗ ಬಾ.... ಬರುವಾಗ ಗೊತ್ತಲ್ಲ ಏನು ತರಬೇಕು ಅಂತ ..... ಒಂದಿಷ್ಟು ಮಲ್ಲೆ ಜೊತೆಗೆ ಸಿಂಧೂರ... ನಿನಗಾಗಿ ಕಾಯ್ತಾ ಇರ್ತೀನಿ....


ನಿನ್ನ
ಕನಸು ಕಂಗಳ ಹುಡುಗಿ