ಮನಸು ಮನಸುಗಳ ಪಿಸುಮಾತು

Wednesday, January 12, 2011

ಸಂಬಂಧಗಳೆಂಬ ಮಿಸ್ಸಿಂಗ್ ಲಿಂಕ್ ನಲ್ಲಿ ಎಲ್ಲೋ ಹುಟ್ಟಿದ ನಾನು.... ಎಲ್ಲೋ ಬೆಳೆದ ನೀನು....ಕೆಲವು ಸಂಗತಿಗಳೇ ಹೀಗೆ ಅನ್ನಿಸುತ್ತೆ! ಎಂದೋ ಎಲ್ಲೋ ಪಡೆದಂತವುಗಳು, ಕಳೆದು ಹೋದ ಅಂಶಗಳು ಆಗಾಗ ದುತ್ತೆಂದು ಎದುರು ನಿಲ್ಲಲಾರಂಭಿಸುತ್ತವೆ. ಯಾವುದೋ ಘಳಿಗೆಯಲ್ಲಿ ಸನ್ನಿವೇಶದಲ್ಲಿ ಬೆಸುಗೆಯಾದ ಸಂಬಂಧಗಳಿಗೆ ಇಷ್ಟೊಂದು ಅರ್ಥವಿದೆಯಾ? ಅನ್ನಿಸಲಾರಂಭಿಸುತ್ತದೆ. ಅವು ನಿತ್ಯಜೀವನದ ಆಗುಹೋಗುಗಳಲ್ಲಿ ತುಂಬಿಕೊಳ್ಳುವಷ್ಟು? ಮನದ ತುಮುಲವನ್ನೆಲ್ಲಾ ಹಂಚಿಕೊಳ್ಳುವಷ್ಟು? ಅಂತಹ ಸಂಬಂಧಗಳು ಹುಟ್ಟುವ ಪರಿಯೆ ಅಂತಹುದು. ಎಂದೋ ಮಾಡಿದ ಒಂದು ಮೆಚ್ಚುಗೆಯ ಇ-ಮೇಲ್ , ಕಳುಹಿಸಿದ ಸ್ನೇಹ ಸಂದೇಶಕ್ಕೆ ಒಂದು ಮಾರುತ್ತರ. ಇವು ಮರೆಯಲಾಗದ ಬಿಡಿಸಲಾಗದ ಒಂದು ಬಂಧಕ್ಕೆ ಬೆಸುಗೆಯನ್ನು ಹಾಕುತ್ತವೆ ಅಂದರೆ ನಿಜವಾಗಿಯೂ ನಂಬಲು ಅಸಾದ್ಯವಾದುದು.

ಹೀಗೆ ಹುಟ್ಟಿದ ಅನೀರಿಕ್ಷಿತ ಸಂಬಂಧಗಳು ಇಡೀ ಜೀವನದಲ್ಲಿ ತುಂಬಿಹೋಗುವಷ್ಟು ಪ್ರಮುಖ ಸ್ಥಾನವನ್ನು ಪಡೆಯಲಾರಂಭಿಸುತ್ತವೆ.ಎಲ್ಲೋ ಕಾಣದ ಮುಖವೊಂದು ಸಮಸ್ಯೆಗಳಿಗೂ ಸಂತಸಗಳಿಗೂ ಸಾಂತ್ವನ ಹೇಳುವ,ನೊಂದಾಗ ಕಾಳಜಿ ತೋರುವ ಜವಾಬ್ದಾರಿಯನ್ನು ಹೊರಲಾರಂಭಿಸುತ್ತದೆ. ಇಂದಿನ ಧಾವಂತದ ಜೀವನದಲ್ಲಿ ಸಮಸ್ಯೆಯನ್ನು ಹಂಚಿಕೊಳ್ಳುವುದಿರಲಿ ಕೇಳುವ ಕನಿಷ್ಟ ಸಹನೆಯನ್ನು ಸಹ ಉಳಿಸಿಕೊಂಡಿರುವುದಿಲ್ಲ. ಯಾವುದೇ ಸಮಯದಲ್ಲಿಯೂ ಹೇಳಿದಷ್ಟನ್ನೂ ಸಹನೆಯಿಂದ ಕೇಳುವ ಹೃದಯವಂತಿಕೆ ಇದೆಯಲ್ಲಾ ಅದು ಎಷ್ಟು ಮಂದಿಗೆ ಇರಲು ಸಾಧ್ಯ? ಅಂತಹ ಸಂಬಂಧಗಳು ಬಹಳ ಮೌಲ್ಯಾಧಾರಿತವೆನಿಸುತ್ತವೆ.

ಅವುಗಳ ವ್ಯಾಪ್ತಿಯೆ ಅಂತಹುದ್ದು, ಒಂದು ವಿಷಾದದ ಛಾಯೆಯನ್ನು ಮುಳುಗಿಸಿ ಬಿಡುವಂತಹ ಅಮೃತಬಿಂದು.... ಒಂದು ನೋವನ್ನು ನಲಿವಾಗಿ ಪರಿವರ್ತಿಸಬಲ್ಲ ಮಿಂಚು... ತುಂಬು ಪ್ರೀತಿಯನ್ನು ಸರ್ವರಲ್ಲೂ ಹಂಚುವ ಉದಾರತೆ, ಕರಟಿದ ಬಳ್ಳಿಗೂ ಚಿಗುರುವ ಆಸೆ ತುಂಬುವ ಮನೋಭಾವ...

ರಕ್ತ ಹಂಚ್ಕೂಂಡು ಹುಟ್ಟಿಲ್ಲ ಕೈ ಕೈ ಹಿಡಿದು ಆಡ್ಲಿಲ್ಲ ಸೀಬೆ ಮಾವು ಹಂಚಿ ತಿನ್ಲಿಲ್ಲ.. ಮನೆ ದಾರಿಗಳು ದೂರ ದೂರ... ಆದರೂ ನಾವು ಹತ್ತಿರ. ಇದು ಮನಸುಗಳ ನಡುವಿನಲ್ಲಿ ಕತ್ತರಿಸಲಾಗದ ಸರಪಳಿ... ಈ ಸರಪಳಿಯ ಬಿಡಿಸಲಾಗದ ಬೆಸುಗೆಗೆ ನಾವು ಕೊಡಬೇಕಾದ್ದು ಇಷ್ಟೆ. ನೆನಪಾದಾಗೊಮ್ಮೆ ಪ್ರೀತಿಯಿಂದ ಕಳುಹಿಸುವ ಒಂದು ಎಸ್ಸೆಮ್ಮೆಸ್, ಒಂದು ಇ-ಮೇಲ್ ಎಂದೋ ಒಂದು ಭೇಟಿ... ಇಂತಹ ಸಂಬಂಧಗಳು ಮುಗ್ಧ ಮಗುವಿನ ರೂಪದಲ್ಲಿ ಅಳಿಯದ ಪ್ರಕೃತಿ ಕೊಡುಗೆ ರೂಪದಲ್ಲಿ ಮನುಷ್ಯ ಸಂಬಂಧಗಳ ಅಡಿಯಲ್ಲಿ, ಹಾಗೆಯೇ ನನ್ನ- ನಿನ್ನ ಒಡನಾಟದಲ್ಲಿ ಎಲ್ಲೋ ಬೆಳೆದ ನಾನು, ಎಲ್ಲೋ ಹುಟ್ಟಿದ ನೀನು......

" ದುಡುಕಿದಾಗ ತಿಳಿ ಹೇಳಿದ, ಅತ್ತಾಗ ಸಾಂತ್ವನ ಹೇಳಿದ ಪ್ರೀತಿಯಿಂದ ಗೂಬೆ ಎಂದು ಕರೆದ ನನ್ನ ಆತ್ಮೀಯರಿಗೆ ಈ ಪತ್ರ ಸಲ್ಲಬೇಕು.

No comments:

Post a Comment