ಮನಸು ಮನಸುಗಳ ಪಿಸುಮಾತು

Tuesday, July 24, 2012

ಸ್ವಾತಿ ಮಳೆಯಾದೋನಿಗೆ




ಮನದುಂಬಿದ ಗೆಳೆಯನಿಗೆ

    ಬಹುದಿನಗಳ ನಂತರ ಸತ್ತ ಬರವಣಿಗೆಯ ಪರಿಯನ್ನು ಚೇತನಗೊಳಿಸಲು ಒಂದು ಸುದಿನ. ಇದನ್ನು ಹಾಗೆಯೇ ಹೇಳಿದರೆ ಚೆಂದ ಅನ್ನಿಸುತ್ತದೆ. ಬಿರುಕಿನ ಬೆಂಗಾಡಿನ ನೆಲದಲ್ಲಿ ಬೀಳುವ ಸಣ್ಣ ಮಳೆಯ ಹನಿಗಳಿಗೆ ಎಲ್ಲೋ ಒಂದು ಗರಿಕೆ ಟಿಸಿಲೊಡೆಯುತ್ತಲ್ಲಾ ಹಾಗೆ? ಕೆಲವು ಘಟನೆಗಳು ಘಟಿಸುವ ಪರಿಯೆ ಅಂತಹದ್ದು....! ಬದುಕಿನ ಯಾನದಲ್ಲಿ ನಾವು ಹೊರುವ ಮೂಟೆಯಲ್ಲಿ ಎಲ್ಲವೂ ಸೇರತೊಡಗುತ್ತವೆ. ಕೆಲವು ಗತಿಸಿದ ನೆನಪುಗಳು  ಕಣ್ಣೀರಾಗಿ ಬದುಕು ಬೆಂಗಾಡು ಎನಿಸಿದರೆ ಮತ್ತೆ ಕೆಲವು ವೇದನೆಗೆ ಸಾಂತ್ವನ ನೀಡುವ ಸ್ವಾತಿ ಮಳೆಯಾಗುತ್ತವೆ. ಯಾವುದು ಏನೇ ಆದರೂ ಎಲ್ಲವನ್ನು ಹೊರುವ ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು ಅಷ್ಟೇ....

    ಎಲ್ಲವನ್ನು ಕಳೆದುಕೊಂಡು ಪ್ರಪಂಚದೆದುರು ದೀನರಾಗಿ ನಿಂತುಬಿಡುತ್ತೇವಲ್ಲಾ..? ಎಲ್ಲವೂ ಬದುಕಿನಲ್ಲಿ ಕಳೆಯಿತು ಅಂದುಕೊಳ್ಳುವಷ್ಟರಲ್ಲೇ ಹುಟ್ಟುವ ಒಂದು ಸಣ್ಣ ಚಿಲುಮೆ ಪುನಃ ಬದುಕನ್ನು ಚಿಗುರಿಸುವ ಯತ್ನ ಮಾಡುತ್ತದಲ್ಲ ಅದನ್ನು ಏನೆಂದು ಕರೆಯಬಹುದು? ಜೀವನವಾ? ಹೊಂದಾಣಿಕೆಯಾ? ಇಲ್ಲಾ ರಾಜಿಯಾ? ಆಗುವ ಸಣ್ಣ ಅವಘಡಗಳಿಗೆ, ನಿರಾಸೆಗಳಿಗೆ, ಅವಮಾನಗಳಿಗೆ ತಲೆಕೊಟ್ಟು ಪ್ರಾಣ ಕಳೆದುಕೊಳ್ಳುವಂತಿದ್ದರೆ ಪ್ರಪಂಚ ಇವತ್ತು ಈ ಪರಿ ಇರ್ತಾ ಇರ್ಲಿಲ್ಲಾ ಅನ್ನಿಸುತ್ತೆ... ದುರಂತಗಳ ಸರಮಾಲೆಯ ಮೇಲೆ ಬದುಕೋದು, ಅದರ ಸಮಾಧಿಯ ಮೇಲೆ ಬದುಕು ಕಟ್ಟಿಕೊಳ್ಳೋದು ಮನುಷ್ಯನ ಸಹಜಗುಣವೇ..ನೆನಪಿನ ಹುತ್ತದಲ್ಲಿ ಸಾಕಷ್ಟು ನೋವಿದ್ದರೂ ಅದನ್ನು ಎಲ್ಲಿಯೂ ಅನಾವರಣಗೊಳಿಸದೆ ಚಿಗುರುವ ಕನಸುಗಳನ್ನು ಪೋಷಿಸುವ ಅವುಗಳನ್ನು ನನಸಾನ್ನಾಗಿಸುವಲ್ಲಿ ಮಾಡುವ ಪ್ರಯತ್ನವನ್ನೇ ಹೋರಾಟವೆನ್ನಬಹುದು...

    ನಮ್ಮ ಜೀವನವೆ ಒಂದು ನದಿಯಿದ್ದಂತೆ..! ಪೂರ್ತಿಯಾಗಿ ಎಲ್ಲೂ ಸಮತಟ್ಟಾಗಿರುವುದಿಲ್ಲಾ... ಎಲ್ಲೋ ಆಳ, ಸಣ್ಣ ಸುಳಿಗಳು, ಭೋರ್ಗರೆತ, ಆಗಾಗ ಪ್ರಶಾಂತವಾಗುವುದು, ಹರಿಯುವ ದಾರಿಯೆಲ್ಲೆಲ್ಲಾ ಹೊಸ ಹೊಸದನ್ನು ಮೈಗೂಡಿಸಿಕೊಂಡು ತನ್ನ ಪರಿಧಿಯನ್ನು ಹೆಚ್ಚಿಸಿಕೊಂಡು ಹೋಗುತ್ತದೆ. ಹಾಗೆಯೇ ಕೆಲವು ಅಲ್ಲಿಯೇ ಕವಲೊಡೆದು ತನ್ನ ದಾರಿಯನ್ನು ನೋಡಿಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ಅದರ ತೀವ್ರತೆಯ ಹಂತವು ನಿಂತುಬಿಡುವುದಿಲ್ಲ ಏಕೆಂದರೆ ಈ ನದಿಗೆ ಆಗಾಗ ಹುಚ್ಚು ಪ್ರವಾಹ ಬರುತ್ತಲೇ ಇರುತ್ತದೆ. ಹೀಗಿದ್ದರೂ ಅವನ್ನೆಲ್ಲಾ ಜೀರ್ಣಿಸಿಕೊಂಡು ನದಿ ಮತ್ತೆ ಹರಿಯುತ್ತಲೇ ಹೋಗುತ್ತದೆ..

    ಅಂತೆಯೇ ನಿನ್ನ ಒಡನಾಟದಲ್ಲಿ ಕಳೆದ ಕೆಲವು ಕ್ಷಣಗಳು ಅವಿಸ್ಮರಣೀಯ, ಅವರ್ಣನೀಯ ಅದು ಸಂವೇದನೆಗಷ್ಟೇ ತಾಗಬೇಕು ನಿಲುಕಬೇಕು. ಆಗಾಗ ನೆನಪಾಗಿ ಕಾಡಿಸುವುದು ಹತ್ತಿದ ಬೆಟ್ಟ, ಸವೆಸಿದ ಮೆಟ್ಟಿಲು, ಬರಹದ ವಿಮರ್ಶೆ, ಒಂದಷ್ಟು ನಗು, ಮಾತು, ಮೌನ, ಸಂಜೆಯ ವೇಳೆಗೆ ಭಾದಿಸಿದ ಕಾಲುನೋವು  ಇವು ಬಹಳ ಅಪ್ಯಾಯವಾನ ಇದನ್ನೆಲ್ಲಾ ಹೇಳಲು ಕಾರಣನಾದವನು ನೀನು, ನಿನ್ನ ಜನುಮದಿನ ನಿಜಕ್ಕೂ ಅವೆಲ್ಲಾ ಸಂಭ್ರಮದ ಮಧುರ ಕ್ಷಣಗಳವು. ಕಣ್ಣಂಚಿನ ಕನಸುಗಳಿಗೆ ಚಿತ್ತಾರವನ್ನು ತುಂಬಿದವು ಇಂತಹ ಘಳಿಗೆಗಳು ಆಗಾಗ ಬರುತ್ತಿರಲಿ ಚಿಗುರಿದ ಸ್ನೇಹ ಅಣಬೆಯಂತಾಗದೆ ನೂರಾರು ಬಿಳಿಲು ಬಿಡುವ ಆಲದ ಮರದಂತಾಗಲಿ ಎನ್ನುವುದಷ್ಟೇ ನನ್ನ ಅನಿಸಿಕೆ.... ಏನಂತೀಯಾ....?


                                                                                                                       ನಿನ್ನ ಆತ್ಮೀಯಳು.

No comments:

Post a Comment