ಮನಸು ಮನಸುಗಳ ಪಿಸುಮಾತು

Sunday, September 4, 2011

ನಿಂತ ನೀರ ಕದಡಬೇಡಿ ಕಲ್ಲುಗಳೆ......
ಯಾಕೋ ಮನಸ್ಸು ಇದ್ದಕ್ಕಿದ್ದ ಹಾಗೆ ತಳಮಳಿಸುತ್ತೆ, ಎಲ್ಲವೂ ಖಾಲಿ... ಶೂನ್ಯವಾಯ್ತೆನೋ ಅನ್ನಿಸುತ್ತೆ. ಖಾಲಿಯಾದ ಮನಸ್ಸಿನ ಮೈದಾನದಲ್ಲಿ ಸರಿದ ಹೆಜ್ಜೆಯ ಗುರುತನ್ನು ಹುಡುಕುವ ಹುನ್ನಾರ, ಸಿಕ್ಕ ಎಳೆಯನ್ನು ಅನುಸರಿಸಿ.. ಹೋದವರು ಸಿಕ್ಕಾರೆಂಬ ಆಸೆ.... ಸಂಭ್ರಮಿಸಿದ ದಿನಗಳನ್ನೊಮ್ಮೆ ನೆನೆದು ಅವೆಲ್ಲಾ ಹಿಂತಿರುಗಿ ಬಂದಾವೆಂಬ ಭಾವ, ಆಸೆಯ ಮರೀಚಿಕೆಯನ್ನು ಬೆಂಬೆತ್ತಿ ಹೋಗಿ ನಿರಾಸೆಯನ್ನು ಅನುಭವಿಸಿ ನರಳುವುದೂ ಒಂದು ಸುಖವೇ? ಮನುಷ್ಯನನ್ನು ಭರವಸೆಗಳು ಆಶಾವಾದಿಯನ್ನಾಗಿಸುತ್ತವೆ ಅನ್ನುವುದಾದರೆ ಸೋತ ಪ್ರೀತಿಯಲ್ಲಿ ಯಾಕೆ ಆಗೋಲ್ಲ?

ಇಲ್ಲಿ ಗತಕಾಲದ ಎಲ್ಲ ವೈಭವ, ನೆನಹುಗಳಿವೆ... ಚಹಾ ಕುಡಿದ ಪೆಟ್ಟಿಗೆ ಅಂಗಡಿ, ಹುಯ್ಯವ ಮಳೆಗೆ ಆಶ್ರಯ ಪಡೆದ ಮರ, ಮಲ್ಲೆ ಹೂ ಮಾರುವ ಅಜ್ಜಿ , ಕೈ ಕೈ ಹಿಡಿದು ಓಡಾಡಿದ ಕ್ಯಾಂಪಸ್ ಎಲ್ಲವೂ ಇಲ್ಲಿ ಜೀವಂತ... ನಿನ್ನನ್ನು ಉಳಿದು.... ನನ್ನ ಸೋತ ಪ್ರೀತಿಯನ್ನುಳಿದು....ನೀ ಇಲ್ಲದ ಕೊರತೆಯನ್ನು ಅವು ಆಗಾಗ ಭಾದಿಸುತ್ತವೆ , ಮರೆಯಲಾರದಷ್ಟು... ತಡೆಯಲಾರದಷ್ಟು....

ಪ್ರೀತಿಗೆ ಎಲ್ಲವನ್ನು ಮರೆಸುವ ಶಕ್ತಿಯಿದೆ ಆದರೆ ಸೋತ ಕಳೆದುಕೊಂಡ ಪ್ರೀತಿಗೆ ಏನನ್ನೂ ಮರೆಯುವ ಶಕ್ತಿಯಿಲ್ಲ.. ನಿರಾಸೆಗೊಂಡ ಮನ , ಹೃದಯ ತಂತಾನೇ ಎಲ್ಲೋ ಶಮನವಾಗುವ ವೇಳೆಯಲ್ಲೇ ತಿರುಗಿದ ದಾರಿ , ಮಲ್ಲೆ ಪರಿಮಳ , ಮಳೆ, ಇಬ್ಬನಿ , ಕೊನೆಗೆ ಕಿತ್ತು ಹೋದ ಚಪ್ಪಲಿಯೂ ಸಹ.... ಅದಕ್ಕೆ ಪಿನ್ನು ಹಾಕಿ ಬಾ ಎಂದು ಮೆಲ್ಲ ಕೈ ಹಿಡಿದು ನಡೆಸಿದ್ದನ್ನ ನೆನೆ ನೆನೆದು ಮನಸ್ಸನ್ನು ನೋಯಿಸಿಕೊಂಡಿಲ್ಲವಾ...? ಎಲ್ಲಾ ಸಂಗತಿಯೂ ನಿನ್ನ ನೆನಪನ್ನೇ ತರುವುದಾದರೆ ನಿನ್ನ ನೆನಪಿಂದ ಹೊರ ಬರುವುದಾದರೂ ಹೇಗೆ...?

ಇಂದು ನನ್ನ ಮನ ಹರಿಯುವ ನೀರಲ್ಲ.. ಕಹಿ ನೆನಪಿನ ನೋವಿನ ಬಗ್ಗಡವನ್ನು ಒಡಲಿನಲ್ಲಿ ಅಡಗಿಸಿ ಮೇಲೆ ತಿಳಿಯಾಗಿ ತೋರುವ ನೀರು.... ನೆನೆಪೆಂಬ ಕಲ್ಲುಗಳು ಆಗಾಗ ನಿಂತ ನೀರನ್ನು ಕದಡುವುದು ಬೇಡ... ಬಗ್ಗಡ ನನ್ನ ಒಡಲಿನಲ್ಲೇ ಇರಲಿ.... ನೆನಪುಗಳು ಆಗಾಗ ನನ್ನೆದೆಯ ಮೀಟುವ ಭರ್ಜಿಗಳಾಗದಿರಲಿ...ಅವು ನಿಂತ ನೀರ ಕದಡುವ ಕಲ್ಲುಗಳಾಗದಿರಲಿ....ಅಂತರ್ಮುಖಿ.

No comments:

Post a Comment