ಮನಸು ಮನಸುಗಳ ಪಿಸುಮಾತು

Wednesday, December 23, 2009

'' ಬೆಳದಿಂಗಳಿನ ದಿನದಂದು ನನ್ನದೆಯಲ್ಲಿ ಬರೀ ಕತ್ತಲು"

ಏನೋ ಯೋಚಿಸುತ್ತಾ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದವಳಿಗೆ ಎಚ್ಚರಗೊಳಿಸಿದ್ದು ಮೊಬೈಲ್ ಕರೆ ಆ ಕಡೆಯಿಂದ ಕೇಳಿಸಿದ್ದು ಉಷಾಳ ಧ್ವನಿ ಚಿತ್ತೀ ನಿಂಗೆ ಒಂದು ವಿಷಯ ಗೊತ್ತ? ಬರೋ ಶುಕ್ರವಾರ ಚಂದ್ರು ಗೆ ನಿಶ್ಚಿತಾರ್ಥ ಗೊತ್ತಾಗಿದೆ ನನಗೆ ಈಗ ತಾನೆ ಗೊತ್ತಾಯ್ತು ಅದಕ್ಕೆ ನಿನಗೆ ಮೊದಲು ಹೇಳಿದೆ ಯಾಕೆ ಹೀಗೆ ಮಾಡ್ಕೊಂಡೆ? ಅವಳ ಪ್ರಶ್ನೆಗೆ ಉತ್ತರಿಸುವಷ್ಟು ವ್ಯವಧಾನವಿರಲಿಲ್ಲ. ಆ ಕ್ಷಣಕ್ಕೆ ಹೃದಯ ಒಂದು ಘಳಿಗೆ ತಲ್ಲಣಿಸಿತು! ಹೇಳಿದ್ದು ನಿಜವಾ? ಇಲ್ಲ ಅವಳು ಹೇಳಿದ್ದು ಸುಳ್ಳಾಗಿರಲಿ ಎಂದು ಮನ ಸಾವಿರ ಬಾರಿ ಅಂದುಕೊಂಡಿತು. ಇದೇನು ನಾನು ಮಾಡಿಕೊಂಡ ಅವಾಂತರವಾ? ಆದರೂ ಮನಸು ತಡೆಯದೆ ನಿನ್ನ ಕೇಳಿದರೆ ಬಂದದ್ದು ನೀರಸ ಉತ್ತರ ಹೌದು ಮನೆಯವರ ಬಲವಂತಕ್ಕೆ ಒಪ್ಪಬೇಕಾಯಿತು. ಮುಂದೆ ಆಡಲು ಮಾತಿಲ್ಲ ನೀರವ ಮೌನಕ್ಕೆ ಅಷ್ಟೆ ಅವಕಾಶ.

ಕಳೆದ ಎರಡು ವರ್ಷದ ಹಿಂದೆ ಕಾಲೇಜಿನಲ್ಲಿ ಆದ ಒಂದು ಆಕಸ್ಮಿಕ ಭೇಟಿ , ಅಲ್ಲೊಂದು ಪುಟ್ಟ ಪರಿಚಯ , ಅದಕ್ಕೊಂದು ಮುಗುಳ್ನಗು ಅನಂತರ ಚಿಗುರಿದ ಸ್ನೇಹ ಅಷ್ಟೊಂದು ಕ್ಲೋಸ್ ಅಗ್ತೀವಿ ಅಂತ ಅನ್ಕೊಂಡಿರಲಿಲ್ಲ. ಒಂದು ದಿನ ಕಾಲೇಜಿಗೆ ಬಾರದೆ ಇದ್ದರೆ ಕಂಗಳಿಗೆ ಇಡೀ ದಿನ ಹುಡುಕುವುದೇ ಕೆಲಸ! ಅದಕ್ಕೊಂದು ಸಣ್ಣ ಜಗಳ ರಾಜಿ ಆಗ್ತಾ ಇದ್ದದ್ದು ಐಸ್ಕ್ರೀಮ್ ಅಂಗಡಿಯಲ್ಲಿ. ಎಲ್ಲವೂ ಒಂಥರಾ ಚೆನ್ನಾಗಿತ್ತು. ಆದರೆ ಇದಕ್ಕೊಂದು ತಿರುವು ಸಿಕ್ಕಿದ್ದು ಕಾಲೇಜಿನಿಂದ ಹೊರಟ ಚಾಮುಂಡಿ ಬೆಟ್ಟದ ಟ್ರಿಪ್ ಅಲ್ಲಿ ನಿನ್ನಿಂದ ಅಂತಹದೊಂದು ಆಹ್ವಾನವನ್ನು ನಿರೀಕ್ಷಿಸಿರಲಿಲ್ಲ. ದೇವರ ಮುಂದೆ ಕೈ ಮುಗಿದು ನಿಂತಿದ್ದವಳಿಗೆ ನೀನು ಕಿವಿಯಲ್ಲಿ ಉಸುರಿದ್ದು ನೆನಪಿದೆಯಾ? ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ ನನ್ನ ಬಾಳ ಸಂಗಾತಿಯಾಗುವ ಇಷ್ಟವಿದ್ದರೆ ಹಾಗೆ ಕಣ್ಣು ಮುಚ್ಚಿ ನನ್ನೆಡೆ ತಿರುಗು ನಿನ್ನ ಹಣೆಗೆ ಸಿಂಧೂರವಿಡುತ್ತೇನೆ. ಹಾಗೇ ನಿನ್ನೆಡೆ ತಿರುಗಿದವಳಿಗೆ ಸಿಂಧೂರವಿಟ್ಟು ಚಿತ್ತೀ ಐ ಲವ್ ಯೂ ಎಂದೊಡನೆ ಅಲ್ಲಿದ್ದ ಎಲ್ಲ ಸ್ನೇಹಿತರು ಹೋ ಕೂಗಿದ್ದರು ನಾಚಿ ನಿನ್ನ ಬೆನ್ನ ಹಿಂದೆ ಅವಿತದ್ದನ್ನು ಎಂದು ಮರೆಯಲು ಸಾಧ್ಯವಿಲ್ಲ. ಆದರೆ ಇದೊಂದು ಅನೀರಿಕ್ಷಿತ ಆಘಾತ! ಹೇಗೆ ತಾನೆ ಸಹಿಸಿಕೊಳ್ಳಬಹುದು.

ಇಂದಿಗೂ ನನ್ನೆದೆಯ ತಾಳವನ್ನು ತಪ್ಪಿಸದೆ ಸರಿದೂಗಿಸಿಕೊಂಡು ಹೋಗ್ತಾ ಇರೋದು ಉಳಿದ ನೆನಪುಗಳಷ್ಟೆ. ನಿನ್ನ ಪತ್ರಗಳು , ಕಾಣಿಕೆಗಳು , ಇಂದಿಗೂ ನನ್ನನ್ನು ಜೀವಂತವಾಗಿ ಇಟ್ಟಿವೆ ಅಂದ್ರೆ ನೀನು ನಂಬ್ತೀಯಾ? ಎಲ್ಲವನ್ನು ಹರಡಿಕೊಂಡು ಕೂತರೆ ನನ್ನದೊಂದು ಪ್ರಪಂಚ ಅಲ್ಲಿ ಸೃಷ್ಟಿಯಾಗುತ್ತದೆ! ಹುಸಿಯಾದ ಎಲ್ಲ ನಂಬಿಕೆಗಳು ಜೀವಂತವಾಗ್ತವೆ. ಅಂತಹದೊಂದು ಕನಸಿನ ಲೋಕದಲ್ಲಿ ಹಲವು ದಿನಗಳನ್ನು ಕಳೆದಿದ್ದೇನೆ ನಿಜವಾಗಿಯೂ ಅವು ನನಗೆ ನೆಮ್ಮದಿಯ ದಿನಗಳು ..ನೆನಪುಗಳೇ ಹಾಗೆ ಅನ್ನಿಸುತ್ತೆ! ಮುಗಿಲೆತ್ತರಕ್ಕೂ ಮಿಗಿಲಾಗಿ ಹರಡಿಕೊಳ್ಳುತ್ತವೆ ಕೆಲವೊಮ್ಮೆ ಮನದಾಳದಲ್ಲಿ ಶೂಲದಂತೆ ಇರಿಯತೊಡಗುತ್ತವೆ. ಇಂತಹ ಸಮಯದಲ್ಲಿ ನನಗೆ ಗರಿಷ್ಟ ನೆಮ್ಮದಿಯನ್ನು ಕೊಡುವ ಸ್ಥಳ ಅದು ಆಶ್ರಮ ನಿನಗೆ ನೆನಪಿದೆಯಾ? ಕಳೆದ ಎರಡು ವರುಷದ ಹಿಂದೆ ಒಂದು ಪೊದೆಯಲ್ಲಿ ಸಿಕ್ಕ ಮಗುವನ್ನು ಜೋಪಾನವಾಗಿ ಆಶ್ರಮ ಸೇರಿಸಿದ್ವಿ. ಅಂದು ನೀನು ಹೇಳಿದ್ದೆ ಇನ್ನು ಈ ಮಗುವಿಗೆ ನಾವೆ ಅಪ್ಪ ಅಮ್ಮ , ಆ ಮಗುವಿಗೆ ಒಂದು ಹೆಸರಿಡುವವರೆಗೂ ನಾವಿಬ್ಬರೂ ಎಷ್ಟು ತಲೆ ಕೆಡಿಸಿಕೊಂಡಿದ್ವಿ! ಆ ನಮ್ಮ ಮುದ್ದಿನ ಮಗಳು ಅನುಷಳಿಗೆ ನಾಳೆಗೆ ಎರಡು ವರುಷ ತುಂಬುತ್ತದೆ. ಪ್ರತಿ ಬಾರಿ ಆಶ್ರಮಕ್ಕೆ ಹೋದಾಗಲೂ ಚಂದೂ ಪಪ್ಪ ಎಲ್ಲಿ ಎಂದು ಕೇಳುತ್ತಾಳೆ ಏನೆಂದು ಉತ್ತರ ಹೇಳಲಿ.. ನೀನು ಆಶ್ರಮಕ್ಕೆ ಇತ್ತೀಚೆಗೆ ಬರ್‍ತಾ ಇಲ್ಲ ಮೇಡಂ ಹೇಳಿದ್ರು ಆದರೆ ಅಲ್ಲಿ ಶಾಂತಜ್ಜಿ ಯಿಂದ ಹಿಡಿದು ಎಲ್ಲ ಮಕ್ಕಳಿಗೂ ನಿನ್ನನ್ನು ನೋಡುವ ಆಸೆ ಪ್ರತಿ ಬಾರಿಯೂ ಇದೇ ಬೇಡಿಕೆಯನ್ನು ಮುಂದಿಡುತ್ತಾರೆ ಏನೂ ಉತ್ತರಿಸಲಾಗದ ಅಸಹಾಯಕ ಪರಿಸ್ಥಿತಿ ನನ್ನದು! ನೀನೊಮ್ಮೆ ಇಲ್ಲಿಗೆ ಬಂದರೆ ನಿನ್ನನ್ನು ಕಣ್ತುಂಬಿ ಕೊಳ್ಳುವ ಆಸೆ ನನ್ನದು. ಇಬ್ಬರೂ ಸಮನಾಗಿ ಹೆಜ್ಜೆ ಹಾಕುವ ಅವಕಾಶವನ್ನು ಕಳೆದುಕೊಂಡಿದ್ದೇವೆ. ನಲುಗಿರುವ ನನ್ನ ಎಲ್ಲಾ ಆಸೆಗಳನ್ನು ಚಿಗುರಿಸಲು ನಿನ್ನ ಸಾವಿರ ನೆನಪುಗಳಿವೆ. ನೆಮ್ಮದಿ ಕೊಡಲು ಆಶ್ರಮವಿದೆ. ಆ ನೆನಪುಗಳೊಂದಿಗೆ ಇಡೀ ಜೀವನವನ್ನು ಕಳೆಯಲು ತೀರ್ಮಾನಿಸಿದ್ದೇನೆ. ಯಾಕೋ ನನ್ನ ಪಾಲಿಗೆ ಹುಣ್ಣಿಮೆಯ ಚಂದ್ರ ನೀನಾಗಲಿಲ್ಲ! ಹುಣ್ಣಿಮೆಯಂದು ಇಡೀ ಜಗತ್ತಿಗೆ ಬೆಳದಿಂಗಳು ನೀಡುವ ಚಂದ್ರ ನನ್ನ ಈ ಪುಟ್ಟ ಎದೆ ಗೂಡಿಗೆ ಒಂದು ಹಿಡಿ ಬೆಳಕನ್ನು ತರಲಾರದೆ ಹೋದ? ಆದರೂ ಪ್ರತಿ ಹುಣ್ಣಿಮೆಯಂದು ಆ ಚಂದ್ರನನ್ನು ನೋಡುತ್ತಾ ನಿನ್ನನ್ನು ಕಾಣುವ ಹುಚ್ಚುತನ ನನ್ನದು.
ಏನಾದರೂ ಆಗಲಿ ಹೊಸಬಾಳಿಗೆ ಹೆಜ್ಜೆ ಇಡುತ್ತಿರುವ ನಿನ್ನ ಹಾದಿ ಎಂದೂ ನಿರಮ್ಮಳವಾಗಿರಲಿ ಅನ್ನುವುದೊಂದೆ ನನ್ನ ಆಶಯ. ಒಮ್ಮೆಯಾದರೂ ಆಶ್ರಮದ ಕಡೆ ಬರುವ ಮನಸ್ಸು ಮಾಡು ಅಲ್ಲಿ ನಿನ್ನನ್ನು ಕಾಣುವ ಆಸೆಯ ಹತ್ತಾರು ಕಾತರದ ಕಂಗಳಿವೆ. ಕೊನೆಗೆ ನನ್ನದೊಂದು ಮಾತು ನಿನ್ನ ಮನದ ಮೂಲೆಯಲ್ಲಿ ನನಗೊಂದು ಪುಟ್ಟ ಸ್ಥಾನ ಕೊಡು ಪ್ಲೀಸ್ ಇಲ್ಲ ಎನ್ನಬೇಡ.............
ನಿನ್ನವಳು

No comments:

Post a Comment