ಮನಸು ಮನಸುಗಳ ಪಿಸುಮಾತು

Wednesday, December 23, 2009

ನಿನ್ನೆದೆಯ ಗೂಡಲ್ಲಿ ಮತ್ತೊಬ್ಬಳನ್ನು ಕಲ್ಪಿಸಲಾರೆ

ಅಂದು ನಿಜವಾಗಿಯೂ ನಿನ್ನನ್ನು ನೋಡ್ತೀನಿ ಅಂತ ಭಾವಿಸಿರಲಿಲ್ಲ. ಅಚಾನಕ್ ಆಗಿ ಕಣ್ಮುಂದೆ ಹಾದು ಹೋದ ನಿನ್ನ ಆ ಸ್ಥಿತಿಯಲ್ಲಿ ನೋಡಿ ಸುಧಾರಿಸಿಕೊಳ್ಳಲು ಬಹಳ ಹೊತ್ತೇ ಬೇಕಾಯಿತು. ಅಂದು ನಿನ್ನ ಬೈಕ್ ಮೇಲೆ ನಿನ್ನನ್ನು ಬಳಸಿ ಕೂತವಳೂ ಯಾರೋ? ನೀನು ಯಾವ ಹುಡುಗಿ ಜೊತೆ ಮಾತನಾಡಿದರೂ ಸಹಿಸಲಾರದವಳು ನಾನು. ನನ್ನ ಮೇಲೆ ಮುನಿಸು ಅಂತ ನನ್ಗೆ ಈ ತರಹ ಶಿಕ್ಷೆಯಾ?

ನೀನು ನನ್ನ ಚಂದ್ರುನಾ? ಕಳೆದ ೬ ತಿಂಗಳಲ್ಲಿ ನೀನು ಇಷ್ಟೊಂದು ಬದಲಾಗಿ ಹೋದೆಯಾ? ಮೂರು ವರುಷದ ನಮ್ಮ ಪ್ರೀತಿ ಈ ೬ ತಿಂಗಳ ಅವಧಿಯಲ್ಲಿ ಹಳಸಿಹೋಯ್ತ. ನನ್ನ ಮೇಲೆ ಅಷ್ಟೊಂದು ಜಿಗುಪ್ಸೆಯಾ? ಹೀಗೆ ನಾವು ಎಷ್ಟು ಬಾರಿ ಜಗಳವಾಡಿ ಕೊಂಡಿಲ್ಲ, ಅಬ್ಬಾ ಎಂದರೆ ಒಂದು ವಾರ ಪುನಃ ಎಲ್ಲಾ ಮರೆತು ಒಂದಾಗುತಿದ್ವಿ. ಜಗಳ ಮಾಡಿ ಮುನಿಸಿಕೊಂಡ ನನ್ನನ್ನು ಯಾವಾಗಲೂ ಸಮಾಧಾನ ಮಾಡ್ತಾ ಇದ್ದದ್ದು ನೀನೆ. ನನಗೆ ಅದರಲ್ಲಿ ಏನೋ ಒಂಥರಾ ಖುಷಿ ನೀನು ಮುದ್ದಿಸೋ ರೀತಿ ಇಷ್ಟ ಆಗ್ತಾ ಇತ್ತು.ಆಗ ನೀನು ಹೇಳ್ತಾ ಇದ್ದೆ ಕೋಪ ಮಾಡಿಕೊಂಡರೆ ನಿನ್ನ ಕೆಂಪು ಕೆಂಪಾದ ಈ ಮುಖಾನ ನೋಡೋಕೆ ನನಗೆ ಇಷ್ಟ ಕಣೆ. ಅದಕ್ಕೆ ನಿನ್ನ ರೇಗಿಸ್ತೀನಿ ಅಂತ. ಹಾಗೆ ಕೊನೆಯ ಬಾರಿ ನಾವು ಜಗಳವಾಡಿ ನಾನು ಮುನಿಸಿಕೊಂಡ ದಿನ ನಿನಗೆ ನೆನಪಿದೆಯಾ?

ಅಂದು ಕಾಲೇಜಿನಲ್ಲಿ ಎತ್ನಿಕ್ ಡೇ ನೀನು ಹೇಳಿದ ಹಾಗೆ ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಬಂದ ನನ್ನನ್ನು ದಿಟ್ಟಿಸಿ ನೋಡುತ್ತಿದ್ದ ನಿನ್ನನ್ನು ನೋಡಿ ನಾಚಿಕೆಯಿಂದ ತಲೆ ತಗ್ಗಿಸಿದ್ದೆ. ಅದೂ ಅಲ್ಲದೆ ಮೊದಲ ಬಾರಿ ಸೀರೆಯುಟ್ಟಿದ್ದರಿಂದ ನಾಚಿಕೆ ಮತ್ತು ಭಯ ಎರಡೂ ಆವರಿಸಿತ್ತು. ಚಂದೂ ನನಗೆ ನಡೆಯೋಕೆ ಆಗ್ತಾಯಿಲ್ಲ ಕಣೋ ಅಂದ ನನ್ನನ್ನು ಕಾಲೇಜಿನ ಕ್ಯಾಂಪಸಿನಲ್ಲಿ ಎಲ್ಲರೂ ನೋಡುತ್ತಿದ್ದರೂ ನನ್ನ ನಡು ಬಳಸಿ ಸಭಾಂಗಣದ ವರೆಗೂ ಕರೆತಂದ ನಿನ್ನ ಹೇಗೆ ಮರೀಲಿ ನಾನು? ಅದೆಕೋ ಸಂಜೆಯಷ್ಟರಲ್ಲಿ ಆದೆನಾಯಿತೋ ಯಾರ ಕಣ್ಣುಗಳ ದೃಷ್ಟಿ ತಾಗಿತೋ? ಅಂದೇ ನಮ್ಮ ಕೊನೆ ಭೇಟಿಯಾಗಬೇಕಿತ್ತೇ? ಅಂದು ಆಗಿದ್ದಾದರೂ ಏನು?

ಸಂಭಾಗಣದಲ್ಲಿ ನಡೆಯುತ್ತಿದ್ದ ಫ್ಯಾಷನ್ ಶೋ ನಲ್ಲಿ ನಿನ್ನ ಕ್ಲಾಸ್ಮೇಟ್ ಜೊತೆಯಲ್ಲಿ Ramp ಮೇಲೆ ಅವಳ ಕೈ ಹಿಡಿದು ಬಂದ ನಿನ್ನ ನೋಡಿ ನನ್ನ ಅಂತರಂಗ ಹೊತ್ತಿ ಉರಿದಿದ್ದು ಯಾಕೆ? ಅಂದು ನಿನಗೆ ಮಾತನಾಡಲು ಅವಕಾಶ ನೀಡದೆ ನಿನ್ನ ನಿಂದಿಸಿದ್ದೆ. ಆದರೆ ನನಗೆ ಗೊತ್ತು ಅದೊಂದು ಕ್ಷುಲ್ಲಕ ಕಾರಣ! ಜಗಳವಾಡುವ ವಿಷಯವೇ ಅಲ್ಲ ಆದರೂ ಯಾಕೆ ಮನಸ್ಸು ಸಹಿಸೊಲ್ಲ? ನಿನ್ನೊಂದಿಗೆ ನಾನು ಅಷ್ಟೇ... ಬೇರೆ ಯಾರ ಜೊತೆಯಲ್ಲೂ ನಿನ್ನನ್ನು ಕಲ್ಪಿಸಲು ಸಾಧ್ಯವಾಗದ ಸಣ್ಣ ಮನಸ್ಸು ನನ್ನದು. ಹುಡುಗಿಯರ ಮನಸ್ಸೇ ಹೀಗೆನಾ? ನಿನ್ನೊಂದಿಗೆ ಯಾವ ಹುಡುಗಿ ಮಾತನಾಡಿದರೂ, ಓಡಾಡಿದರೂ ಯಾಕೆ ನನಗೆ ಸಹಿಸಲು ಆಗಲ್ಲ. ಅದಕ್ಕಾಗಿ ಸಾವಿರ ಬಾರಿ ನಿನ್ನೊಂದಿಗೆ ಕಿತ್ತಾಡಿದ್ದೇನೆ. ಅದೇನು ನಿನ್ನ ಮೇಲೆ ನನಗೆ ಇದ್ದ ಉತ್ಕಟ ಪ್ರೇಮವಾ? ನನ್ನವನನ್ನೇ ನಂಬದ ಮೂರ್ಖತನವಾ? ಅಥವಾ ಮತ್ಸರ ಬೆನ್ನಿಗಂಟಿದ ಶಾಪವಾ? ಅಂತಹ ಒಂದು ಸಣ್ಣತನಕ್ಕಾಗಿ ಇಂದು ನಾನು ನಿನ್ನನ್ನು ದೂರಮಾಡಿಕೊಂಡನಾ?

ನೀನು ನನಗಿಂತ ಪ್ರಬುಧ್ದ ಮನಸಿನವ ಅನೇಕ ಬಾರಿ ನನಗೆ ತಿಳಿ ಹೇಳಿದ್ದೀಯಾ, ಅದರೂ ನಿನ್ನನ್ನು ಅರ್ಥ ಮಾಡಿಕೊಳ್ಳದ ಮೂರ್ಖಳು ನಾನು. ನಾನು ನನ್ನದು ಎನ್ನುವ ತೀವ್ರ ನಿರೀಕ್ಷೆಗಳಲ್ಲೆ ಹಲವಾರು ಸಂಬಂಧಗಳನ್ನು ನಾವೇ ಸ್ವತಃ ಹಾಳುಮಾಡಿಕೊಳ್ಳುತ್ತೀವಿ ಅನ್ನೋದು ಅರ್ಥ ಆಗಿದೆ. ಎಂದಿನ ಹಾಗೆ ನೀನು ಈ ಬಾರಿ ನನ್ನ ಬಳಿ ಬರಲಿಲ್ಲ, ನಂಗೊತ್ತು ನಿನಗೆ ನನ್ನ ಮೇಲೆ ಜಿಗುಪ್ಸೆ, ಬೇಸರ, ಅದಕ್ಕಾಗಿ ನನ್ನ ಸ್ಠಾನಕ್ಕೆ ಮತ್ತೊಬ್ಬಳನ್ನು ತರುವ ಮನಸು ಬೇಡ. ಎಂದೂ ನಿನ್ನೆದೆಯ ಗೂಡಲ್ಲಿ ನಾನು ಮತ್ತೊಬ್ಬಳನ್ನು ಕಲ್ಪಿಸಲಾರೆ.... ಕಳೆದ ೬ ತಿಂಗಳಲ್ಲಿ ಸಾಕಷ್ಟು ನಲುಗಿದ್ದೇನೆ. ಆ ಬಾಲಿಶ ಮನಸ್ಸಿನಿಂದ ಹೊರಬಂದಿದ್ದೇನೆ, ಪ್ರೀತಿ ಒಂದು ಗುರುತರವಾದ ಜವಾಬ್ದಾರಿ! ಅದನ್ನು ನಿಭಾಯಿಸುವಲ್ಲಿ ನಾನು ಸೋತೆ. ಮುಂದೆ ಎಂದೂ ನಿನ್ನನ್ನು ನೋಯಿಸದ ದೊಡ್ಡ ಜವಾಬ್ದಾರಿ ನನ್ನ ಮೇಲಿರಲಿ ಆಗಿರುವ ನನ್ನ ತಪ್ಪನ್ನು ಸರಿಪಡಿಸಿಕೊಂಡು ನಿನ್ನೊಂದಿಗೆ ನೆಮ್ಮದಿಯ ಬದುಕು ಸಾಗಿಸುವ ಆಸೆ ನನ್ನದು, ಇದೊಂದು ಬಾರಿ ಕ್ಷಮಿಸುವ ಮನಸು ಮಾಡು.. ಈ ಪತ್ರ ತಲುಪಿದ ಕೂಡಲೆ ನನ್ನನ್ನು ಬಂದು ಸೇರುವೆ ಎಂಬ ನೀರಿಕ್ಷೆಯಲ್ಲಿ ಕಾಲೇಜಿನ ಅ ಕೆಂಪು ಹೂವಿನ ಮರದ ಕೆಳಗೆ ಕಾಯ್ತಾ ಇರ್ತೀನಿ....

1 comment:

  1. ಆತ್ಮೀಯ
    ಪ್ರೀತಿ ಒ೦ದು ಗುರುತರವಾದ ಜವಾಬ್ದಾರಿ .ಇದನ್ನ ಎಲ್ಲರೂ ಅರಿತರೆ ನಿಜಕ್ಕೂ ದುರ೦ತಗಳು ಸ೦ಭವಿಸೊಲ್ಲ.
    ಒಳ್ಳೆಯ ಪತ್ರ .ಅ೦ದ ಹಾಗೆ ಚ೦ದ್ರು ಪಾತ್ರ ಕಾಲ್ಪನಿಕನ್ವೇ? ಹ ಹ್ಹ ಹ್ಹಾ
    ಹರಿ

    ReplyDelete